20091119

ಪ್ರೀತಿಯ ಯಡಿಯೂರಪ್ಪನವರೇ.

ಸರೀ ಸುಮಾರು ಮೂರು ವಾರದಿಂದ ನೀವು ಪಡುತ್ತಿದ್ದ ಯಾತನೆಯನ್ನು ಒಬ್ಬ ಪ್ರಜೆಯಾಗಿ ನಾನು ಅರ್ಥ ಮಾಡಿಕೊಂಡಿದ್ದೇನೆ.
ಮುಖ್ಯಮಂತ್ರಿಯೊಬ್ಬರು ಇಷ್ಟೊಂದು ಕಷ್ಟ ಪಟ್ಟದ್ದು ಬಹುಶಃ ಬೇರೆಲ್ಲೂ ಕಾಣೆವು.ಆ ಮಟ್ಟಿಗೆ ನೀವು ಮುಗ್ಧರು ಎಂಬುದು ಎಂಥವನಿಗೂ ಅರ್ಥವಾಗುತ್ತದೆ.
ಯಡಿಯೂರಪ್ಪನವರೇ,ನೀವು ಹುಟ್ಟು ಹೋರಾಟಗಾರರು.ನಾನು ಬಾಲ್ಯದಿಂದಲೇ ಆಕಾಶವಾಣಿಯ ಪ್ರದೇಶಸಮಾಚಾರದಲ್ಲಿ,ವಿಧಾನಮಂಡಲದಲ್ಲಿ ಇಂದು ಕಾರ್ಯಕ್ರಮದಲ್ಲಿ ನಿಮ್ಮ ಹೋರಾಟಗಳು ಹೇಳಿಕೆಗಳ ಬಗ್ಗೆ ಕೇಳುತ್ತಿದ್ದೆ.ಪತ್ರಿಕೆಗಳಲ್ಲಿ ನೀವು ಆಗಾಗ್ಗೆ ಕಾಣಿಸಿಕೊಳ್ಳುವುದನ್ನು ನೋಡುತ್ತಿದ್ದೆ.ನಮ್ಮೂರಿಗೂ ನೀವೊಮ್ಮೆ ಬಂದಾಗ ನಿಮ್ಮನ್ನು ನೋಡಲೇಬೇಕು ಎಂದು ಕಲ್ಯಾಣಮಂಟಪದೊಳಗೆ ಬಂದಿದ್ದೆ.ನೀವು ಕನ್ನಡಿ ಎದುರು ನಿಂತು ತಲೆ ಬಾಚಿ,ಪೌಡರ್ ಹಾಕಿಕೊಳ್ಳುತ್ತಿದ್ದುದನ್ನು ನೋಡಿ,ವಾವ್ ಎಷ್ಟೊಂದು ಸೌಂದರ್ಯಪ್ರಜ್ಞೆ ಇದೆ ಎಂದುಕೊಂಡಿದ್ದೆ..
ಈಗಲೂ ನೀವು ಅದೇ ರೀತಿ ಇದ್ದೀರಿ..ಅದು ನನಗೆ ಸಂತೋಷವಾಗಿದೆ.
ಆದರೆ ಈಗ ನಿಮ್ಮೊಳಗಿನ ಸೌಂದರ್ಯ ಪ್ರಜ್ಞೆಗೇನಾಗಿ ಹೋಯಿತು?ಅದೇ ನನ್ನ ಪ್ರಶ್ನೆ.
ನೀವೇಕೆ ಇಷ್ಟೊಂದು ಯಮಯಾತನೆಗಳ ನಡುವೆಯೂ ಅಧಿಕಾರವನ್ನು ಟಂಕಿಸಿಕೊಂಡಿದ್ದೀರಿ?
ಅದನ್ನು ನೀವು ಹೇಳಬೇಕು..
ಅಂತರಂಗಪೂರ್ವಕ ನೀವು ಇದನ್ನೆಲ್ಲಾ ಒಪ್ಪಿಕೊಂಡು ಉಳಿದವರಲ್ಲ.ನಿಮ್ಮ ಅಂತರ್ಯದಲ್ಲಿ ಬೇಗುದಿ ಆರಿದೆ ಎಂದರೆ ಯಾರೂ ನಂಬಲಿಕ್ಕಿಲ್ಲ.ಹಾಗೆಂದ ಮೇಲೆ ಆತ್ಮವಂಚನೆ ಮಾಡಿಕೊಂಡು ನೀವು ಉಳಿದಿದ್ದೀರಾ?ನಿಮ್ಮ ಹೃದಯಕ್ಕೆ ನೇರವಾಗಿ ಉಳಿಯಲಾರದೇ ಅಧಿಕಾರದ ಗದ್ದುಗೆಯಲ್ಲಿದ್ದೀರಾ?ಅಥವಾ ಯಾವುದೋ ಪ್ರತೀಕಾರಕ್ಕೆ ವ್ಯೂಹ ರಚಿಸುತ್ತಿದ್ದೀರಾ?
ಯಡಿಯೂರಪ್ಪಾಜೀ,ನಿಮಗೂ ಮುಖ್ಯಮಂತ್ರಿ ಹುದ್ದೆಯ ಆಸೆಯೇ?
ಅದು ಯಾರಿಗೆ ತಾನೇ ಇರುವುದಿಲ್ಲ.ಆಡಳಿತ ಎಂದರೆ ಏನೆಂದು ಅರಿಯದವರೂ ಮುಖ್ಯಮಂತ್ರಿಯಾಗಲು ಹಪಿಹಪಿಸುತ್ತಾರೆ.ಗ್ರಾಮಪಂಚಾಯತ್‌ನ ಮೆಟ್ಟಿಲು ನೋಡದವರು,ಬಡವರಿಗೆ ಒಂದು ರೇಶನ್ ಕಾರ್ಡು ಕೊಡಿಸಲಾಗದವರೂ ಕನಸು ಕಾಣುವುದು ಮುಖ್ಯಮಂತ್ರಿ ಆಗಬೇಕು ಎಂದು.ಆದರೆ ನೀವು ಹಾಗಲ್ಲ.ನಿಮಗೆ ಅರ್ಹತೆ ಇದೆ,ಆದರೆ ಈ ಹೊತ್ತಿನಲಿ ಅಲ್ಲ.
ಈಗ್ಗೆ ನಾಲ್ಕು ವರ್ಷಗಳ ಹಿಂದೆ ಅಗೋಸ್ಟ್ ತಿಂಗಳಲ್ಲಿ ನೀವು ಮುಖ್ಯಮಂತ್ರಿಯಾಗೋ ಆಸೆಗಾಗಿ,ಕೇಂದ್ರ ನಾಯಕರು ನಿಮ್ಮನ್ನು ಉಪೇಕ್ಷೆ ಮಾಡಿದರು ಎಮದು ನೀವು ಬೆಂಗಳೂರಿಗೆ ಬಂದವರೇ ಕಾಣೆಯಾದಿರಿ,ಆಮೇಲೆ ಹುಡುಕಿದರೆ ನೀವು ಸಿಕ್ಕಿದ್ದು ಜೆಡಿಎಸ್ ಅಥವಾ ಕಾಂಗ್ರೆಸ್ ಪಾಳೆಯದಲ್ಲಿ.ಅಲ್ಲಿಂದ ನಿಮ್ಮನ್ನು ಎತ್ತಿ ತಂದ ಮಹಾನಾಯಕರು ಅದೆಂತೋ ನಿಮ್ಮ ಬ್ರೈನ್‌ವಾಶ್ ಮಾಡಿದರು.ರಾಜ್ಯದ ಪಟ್ಟ ಎಂದಾದರೂ ಸಿಕ್ಕಾಗ ಅದು ನಿಮ್ಮದೇ ಎಂದರು.ನೀವು ಅದಕ್ಕಾಗಿ ಕಾದಿರಿ.
ಅದೂ ಸಿಕ್ಕಿತು. ಹಾಗೇ ಸಿಗುವಂತೆ ಮಾಡಲು ಹಲವಾರು ತಂತ್ರಗಳನ್ನು ಹೆಣೆಯಲಾಯಿತು. ಆ ತಂತ್ರಿಗಳೇ ರೆಡ್ಡಿ ಸೋದರರು.
ಯಾವಾಗ ಅವರ ಜೊತೆ ನೀವು ಸಿಕ್ಕಿಕೊಂಡಿರೋ ಅಲ್ಲಿಗೆ ನಿಮ್ಮ ಒಳಗಿದ್ದ ಯಡಿಯೂರಪ್ಪ ಕಾಣೆಯಾಗಿದ್ದಾನೆ.
ಹೋರಾಟಗಾರ ಕಳೆದುಹೋಗಿದ್ದಾನೆ
ಮೂಲ ರಾಷ್ಟ್ರೀಯತೆಯ ನಿಮ್ಮ ಶರೀರ ಮತ್ತು ಹೋರಾಟದ ಕಿಚ್ಚಿನ ಮನಸ್ಸು ಬಿದ್ದು ಹೋಗಿದೆ.
ಹಾಗೆಂದು ಹೇಳಲು ಸಾಕಷ್ಟು ಉದಾಹರಣೆಗಳು ನಿಮ್ಮಲ್ಲೇ ಸಿಕ್ಕಿವೆ,ಸಿಗುತ್ತಿವೆ.
ಮುಖ್ಯಮಂತ್ರಿ ಎಂಬ ಪಟ್ಟ ನಿಮ್ಮ ಮಹದಾಸೆ.ಅದಕ್ಕಾಗಿ ನೀವು ರೆಡ್ಡಿಗಳ ಪಾಳೇಗಾರಿಕೆಗೆ ನಜರು ಒಪ್ಪಿಸಿದರಿ.ನೀವು ಕರ್ನಾಟಕದ ಮುಖ್ಯಮಂತ್ರಿಯಾಗಿರಬಹುದು ಆದರೆ ರೆಡ್ಡಿಗಳು ನಿಮ್ಮ ಮುಖ್ಯಮಂತ್ರಿಗಳು.
ನಿಜಾರ್ಥದಲ್ಲಿ ಈಗ ಕರ್ನಾಟಕದಲ್ಲಿ ಇರೋದು ರಾಜರ ಆಡಳಿತ.ಬಳ್ಳಾರಿಯ ಜನಾರ್ದನ ರೆಡ್ಡಿ ಈ ನಾಡಿನ ರಾಜ.ನೀವು ಆಸ್ಥಾನದ ಮುಖ್ಯಮಂತ್ರಿ..
ರಾಜ ಹೇಳಿದಂತೆ ನಡೆದುಕೊಳ್ಳುವುದು ಮುಖ್ಯಮಂತ್ರಿಯ ಕೆಲಸ.
ನೀವು ಈಗ ಅದನ್ನೇ ಮಾಡುತ್ತಿದ್ದೀರಿ.ದೆಹಲಿಗೆ ಹೋದ ಮೇಲೆ ಜನಾರ್ದನ ರೆಡ್ಡಿಯ ಪಟ್ಟಾಭಿಷೇಕವಾಯಿತು.ನೀವು ಮೌನವಾಗಿ ಅದನ್ನು ನೋಡಬೇಕಾಯಿತು.ಸುಬ್ರಹ್ಮಣ್ಯದ ಸುಬ್ಬಪ್ಪ,ವೈಷ್ಣೋದೇವಿಯ ದೇವಿ ಕೂಡಾ ಇಲ್ಲಿ ಅಸಹಾಯಕರು.
ಏಕೆಂದರೆ ನೀವು ಬೆನ್ನೆಲುಬನ್ನೇ ಕಳೆದುಕೊಂಡ ಬೊಂಬೆ.ಬರೀ ಲೆದರ್ ಪಪ್ಪೆಟ್.
ರೆಡ್ಡಿಗಳಿಗೆ ರಾಜ್ಯಾಭಿಷೇಕ ಮಾಡಿದ ನಿಮ್ಮನ್ನು ಮುಖ್ಯಮಂತ್ರಿ ಎಂದು ಸಂವಿಧಾನಿಕವಾಗಿ ಒಪ್ಪಬಹುದು ಅಷ್ಟೇ.ಗಾರ್ಡ್ ಆಫ್ ಹಾನರ್ ಅಥವಾ ಪುಕ್ಕಟೆ ಸಲ್ಯೂಟ್ ನಿಮಗೆ ಮುಫತ್ತಾಗಿ ಸಿಗಬಹುದು.ಕಡತಗಳಿಗೆ ನಿಮ್ಮ ಸಹಿ ಬೀಳಬಹುದು,ಆದೇಶಗಳನ್ನು ನೀವು ಚಲಾಯಿಸಬಹುದು..ಆದರೆ ಯಾವುದನ್ನೂ ನೀವು ನಿಮ್ಮ ಹೃದಯಕ್ಕೆ ನೇರವಾಗಿ ಮಾಡಲು ಶಕ್ತರಿಲ್ಲ.ಅದನ್ನು ಎಂದೋ ಕಳೆದುಕೊಂಡಿರಾ?
ರೆಡ್ಡಿಗಳು ನಿಮ್ಮ ಮುಖ ಕೂಡಾ ನೋಡಲ್ಲ ಎಂದರು.ನೀವು ಪಾಪದ ಕೊಡ ತುಂಬಿದ ಕಂಸ ಎಂದರು.(ಅದು ಶಿಶುಪಾಲ ಎಂದಾಗಬೇಕಿತ್ತು,ಏನು ಮಾಡೋಣ ಅವರ ಪೌರಾಣಿಕ ಜ್ಞಾನ ಅಷ್ಟೇ ಇತ್ತು..ಇರಲಿ)
ನೀವು ಆಕ್ಷಣಕ್ಕೆ ದೆಹಲಿ ಬಿಟ್ಟು ಬರುತ್ತೀರಿ ಎಂದುಕೊಂಡಿದ್ದೆ.ನೀವು ಬರಲಿಲ್ಲ.ಯಡಿಯೂರಪ್ಪ ತೊಲಗಬೇಕು ಎಂದವರು ಕಾಂಗ್ರೆಸ್ಸಿಗರೂ ಅಲ್ಲಾ ಜೆಡಿಎಸ್ಸೂ ಅಲ್ಲ.ನಿಮ್ಮವರೇ..ನೀವೇ ತಂದು ಎಮ್ಮೆಲ್ಲೆ ಮಾಡಿದವರೇ.ನೀವು ಮುಖ್ಯಮಂತ್ರಿಯಾಗ ಬೇಕಾದರೆ ದೊರೆಯಬೇಕಾಗಿದ್ದ ತಲೆಗಳೇ..
ನೀವು ಆದರೂ ಮುಖ್ಯಮಂತ್ರಿಯಾಗಿರಲೇಬೇಕು ಎಂದು ಉಳಿದುಕೊಂಡಿದ್ದೀರಲ್ಲಾ..ಇದೇ ನನಗೆ ಅಚ್ಚರಿ.ನಿಮ್ಮ ಖಾಸಾ ಗೆಳತಿ ಶೋಭಾ ಅವರನ್ನು ಹೊರಗೆಸೆದಾಗ ನನಗೆ ಮಂಗನನ್ನು ನೀರಿನ ತೊಟ್ಟಿಯಲ್ಲಿ ಹಾಕಿದ ಒಂದು ಕತೆ ನೆನಪಾಯಿತು.ತೊಟ್ಟಿಯೊಳಗೆ ಮಂಗನ ಸಂಸಾರವನ್ನು ಇಟ್ಟು ನೀರು ತುಂಬುತ್ತಾ ಹೋದಾಗ ಕಡೆಗಳಿಗೆಯವರೆಗೂ ತಾಯಿ ಮಂಗ ತನ್ನ ಮಗುವನ್ನು ಎತ್ತೆತ್ತಿ ಹಿಡಿಯಿತಂತೆ.ಕೊನೆಗೂ ನೀರು ಮೂಗಿನ ಮಟ್ಟಕ್ಕೆ ಬಂದಾಗ ಮಗುವನ್ನು ಕೆಳಗೆ ನೀರಲ್ಲಿ ಹಾಕಿ ತಾನು ಅದನ್ನು ಮೆಟ್ಟಿ ನಿಂತಿತಂತೆ.
ಕೊನೆಗೂ ಬದುಕುವ ಪ್ರಶ್ನೆ ಬಂದಾಗ ಎಲ್ಲರೂ ಹೀಗೆ ಎಂಬುದು ಕತೆಯ ಸಾರಾಂಶ.
ಯಡಿಯೂರಪ್ಪಾಜೀ ನಿಮಗೆ ಈ ಬದುಕು ಬೇಕಿತ್ತಾ?
ನೀವು ರಾಜೀನಾಮೆ ಕೊಡಬೇಕು ಎಂದು ನಾನು ಹೇಳಲಾರೆ,,ಆದರೆ ನೀವು ರಾಜರ ಆಡಳಿತದಲ್ಲಿ ಅದೆಂಥ ಮುಖ್ಯಮಂತ್ರಿಯಾಗಿ ಉಳಿಯಬಲ್ಲಿರಿ ಎಂಬುದಷ್ಟೇ ನನ್ನ ಜಿಜ್ಞಾಸೆ.
ನೀವು ಬೀರಬಲ್ಲ ಆಗಬಹುದು ಆದರೆ ರೆಡ್ಡಿಗಳು ಅಕ್ಬರ್ ಆಗಲಾರರು.ನೀವು ತಿಮ್ಮಣ್ಣರಸ ಆಗಬಹುದಾ ಎಂದರೆ ಬಳ್ಳಾರಿ ದೊರೆಗಳು ಕೃಷ್ಣದೇವರಾಯ ಆಗುವುದಾದರೂ ಹೇಗೆ?
ರಾಜಕೀಯ ಎಂದರೆ ಇದೇನಾ ಎಂದು ಕರ್ನಾಟಕದ ಜನ ಕೇಳುತ್ತಿದ್ದಾರೆ ಯಡಿಯೂರಪ್ಪನವರೇ..
ಬಡವರ ಸೇವೆ ಮಾಡಲು ಮುಖ್ಯಮಂತ್ರಿಯೇ ಆಗಿರಬೇಕೆಂದೇನೂ ಇಲ್ಲವಲ್ಲಾ..ಅಧಿಕಾರ ಬೇಕು ನಿಜ.ಆತ್ಮ ಸಾಕ್ಷಿ ಕಳೆದುಕೊಂಡು ಅಲ್ಲ..